ಕಾಡು ಕಸ್ತೂರಿ

 ಹೈಬಿಸ್ಕಸ್ ಅಬೆಲ್‍ಮಾಸ್ಕಸ್ ಎಂಬ ಶಾಸ್ತ್ರೀಯ ಹೆಸರಿನ ಸಸ್ಯ. ಕಸ್ತೂರಿ ಬೆಂಡೆ ಇದರ ಪರ್ಯಾಯ ನಾಮ. ಮಾಲ್ವೇಸೀ ಕುಟುಂಬಕ್ಕೆ ಸೇರಿದೆ. ಬ್ರೆಜಿಲ್, ಜಾವ, ವೆಸ್ಟ್ ಇಂಡೀಸ್ ಮತ್ತು ಭಾರತದ ಉಷ್ಣ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದನ್ನು ಉದ್ಯಾನವನಗಳಲ್ಲಿ ಅಂದಕ್ಕಾಗಿ ಬೆಳೆಸುವುದೂ ಉಂಟು. ಕಾಡು ಕಸ್ತೂರಿ ಸಾಮಾನ್ಯವಾಗಿ 2'-6' ಎತ್ತರಕ್ಕೆ ಬೆಳೆಯುವ ಪೊದೆ ಸಸ್ಯ. ಎಲೆಗಳು ಸಂಯುಕ್ತ ಮಾದರಿಯವು. ಆಕಾರ ಹಸ್ತ 

ದಂತೆ. ಪ್ರತಿ ಎಲೆಯಲ್ಲೂ 5-7 ಹಾಲೆಗಳಿವೆ. ಹೂಗಳು ದೊಡ್ಡ ಗಾತ್ರದವು. ಅವುಗಳ ಬಣ್ಣ ಹಳದಿ. ಕಾಯಿ ಸಂಪುಟ (ಕ್ಯಾಪ್ಸೂಲ್) ಮಾದರಿಯದು. ಒಳಗೆಲ್ಲ ಮೂತ್ರಪಿಂಡಾಕಾರದ, ಕಂದು ಬಣ್ಣದ ಅನೇಕ ಸಣ್ಣ ಬೀಜಗಳಿವೆ. ಬೀಜಗಳಿಗೆ ಒಂದು ವಿಶೇಷ ಬಗೆಯ ಸುವಾಸನೆಯಿದೆ. ಈ ಸುವಾಸನೆಯುಕ್ತ ಬೀಜಗಳಿಗಾಗಿ ಗಿಡ ಬಹಳ ಹೆಸರಾಗಿದೆ. ಬೀಜಗಳಿಗೆ ಕಸ್ತೂರಿ ಬೀಜ (ಮಸ್ಕ್ ಸೀಡ್ಸ್) ಎಂಬ ವಾಣಿಜ್ಯ ನಾಮವಿದೆ.

ಕಾಡು ಕಸ್ತೂರಿಯ ಬೀಜಗಳಿಂದ ಮಸ್ಕ್ ಬೀಜದ ಎಣ್ಣೆ ಅಥವಾ ಆಂಬ್ರೆಟ್ ಬೀಜದೆಣ್ಣೆ ಎಂದು ಕರೆಯಲಾಗುವ ತೈಲವೊಂದನ್ನು ತೆಗೆಯುತ್ತಾರೆ. ಬೀಜಗಳನ್ನು ಪುಡಿ ಮಾಡಿ ಉಗಿ ಆಸವೀಕರಣದ ಮೂಲಕ ಹೊರತೆಗೆಯುತ್ತಾರೆ. ಈ ಎಣ್ಣೆ ಸಾಮಾನ್ಯ ಉಷ್ಣತೆಯಲ್ಲಿ ಗಟ್ಟಿಯಾದ ದ್ರವರೂಪದಲ್ಲಿರುತ್ತದೆ. ಇದರಲ್ಲಿ ಕೊಬ್ಬಿನ ಅಂಶ ಜಾಸ್ತಿ. ಸುಗಂಧ ವಸ್ತುಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುವಾಗ ಈ ಎಣ್ಣೆಯಲ್ಲಿರುವ ಕೊಬ್ಬಿನಂಶವನ್ನು ದುರ್ಬಲ ಮದ್ಯಸಾರದಲ್ಲಿ ಬೆರೆಸಿ ಬೇರ್ಪಡಿಸುತ್ತಾರೆ. ಈ ಎಣ್ನೆಯಲ್ಲಿ ಫಾರ್ನಿಸಾಲ್ ಎಂಬ ಒಂದು ಬಗೆಯ ಆಲ್ಕೋಹಾಲ್ ಗಣನೀಯ ಪ್ರಮಾಣದಲ್ಲಿದೆ. ಅಲ್ಲದೆ ಇದರಲ್ಲಿ ಆಂಬ್ರೆಟಲೈಡ್ (ಅ16ಊ28ಔ2) ಎಂಬ ಕೀಟೋನ್ ಇರುವುದರಿಂದ ಈ ಎಣ್ಣೆಗೆ ಕಸ್ತೂರಿಯಂಥ ವಾಸನೆಯಿದೆ. ಇದಿರುವುದರಿಂದಲೇ ಕಸ್ತೂರಿ ಎಣ್ಣೆಯನ್ನು ಅಥವಾ ಇದನ್ನು ಪರಿಷ್ಕರಿಸಿ ಪಡೆಯಲಾಗುವ ಆಂಬ್ರೆಟಲೈಡನ್ನು ಉತ್ತಮ ದರ್ಜೆಯ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಸ್ತೂರಿಯಂಥದೇ ಒಳ್ಳೆಯ ವಾಸನೆಯಿರುವುದರಿಂದ ಆದರೆ ಪ್ರಾಣಿ ಜನ್ಯ ಕಸ್ತೂರಿಯಲ್ಲಿ ಕೆಲವು ವೇಳೆ ಇರಬಹುದಾದಂಥ ಲದ್ದಿಯ ವಾಸನೆ ಇದರಲ್ಲಿ ಇಲ್ಲದಿರುವುದರಿಂದ ಕಾಡು ಕಸ್ತೂರಿ ಎಣ್ಣೆ ಉತ್ತಮ ದರ್ಜೆಯದೆಂದು ಪ್ರಸಿದ್ಧಿಯಾಗಿದೆ. ಅರಬ್ ದೇಶದಲ್ಲಿ ಕಾಫಿಪುಡಿಯೊಂದಿಗೆ ಇದನ್ನು ವಾಸನೆಗೋಸ್ಕರ ಮಿಶ್ರಮಾಡುತ್ತಾರೆ. ಭಾರತದಲ್ಲಿ ಈ ಎಣ್ಣೆಯನ್ನು ಅನೇಕ ವಸ್ತುಗಳೊಂದಿಗೆ ಬೆರಕೆ ಮಾಡಿ ಉಪಯೋಗಿಸುತ್ತಾರೆ. ಉಣ್ಣೆ ಬಟ್ಟೆಗಳನ್ನು ಕ್ರಿಮಿಕೀಟಗಳಿಂದ ದೂರವಿಡಲು ಬೀಜದ ಪುಡಿಯ ಬಳಕೆ ಉಂಟು. ಬೀಜಗಳನ್ನು ಬಲವರ್ಧಕ ಔಷಧಿಯಾಗಿ, ಹಸಿವುಂಟು ಮಾಡಲು, ನರಮಂಡಲದ ದುರ್ಬಲತೆಯನ್ನು ಹೋಗಲಾಡಿಸಲು ಉಪಯೋಗಿಸುವುದುಂಟು. ಕಾಂಡದಿಂದ ನಾರನ್ನು ಸಹ ತಯಾರು ಮಾಡಬಹುದು. ಎಲೆ, ಎಳೆ ಕಾಂಡ ಹಾಗೂ ಹಸಿರುಕಾಯಿಗಳನ್ನು ತರಕಾರಿಯಾಗಿ ಉಪಯೋಗಿಸುವ ರೂಢಿ ಹಲವು ದೇಶಗಳಲ್ಲಿದೆ.  

(ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ